ತುಮಕೂರು ಸಿದ್ದಗಂಗಾ ಮಠ ಶಿವಕುಮಾರ ಶ್ರೀ ಹೆಚ್ಚಿನ ಚಿಕಿತ್ಸೆಗಾಗಿ ಏರ್‌ ಅಂಬುಲೆನ್ಸ್‌ ಮೂಲಕ ಚೆನ್ನೈಗೆ ಸ್ಥಳಾಂತರ !!!

ಶನಿವಾರ ಜ್ವರದಿಂದ ಬಳಲಿದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಶ್ರೀಗಳನ್ನು ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ರಕ್ತದಲ್ಲಿ ಸೋಂಕು, ಪಿತ್ತನಾಳ ಹಾಗೂ ಪಿತ್ತ ಕೋಶದಲ್ಲಿ ಸೋಂಕು ಕಂಡು ಬಂದಿದ್ದರಿಂದ ಸ್ಟೆಂಟ್‌ ಅಳವಡಿಸಿ ಚಿಕಿತ್ಸೆ ನೀಡಿ ಸೋಮವಾರ ಶ್ರೀಗಳನ್ನು ಮಠಕ್ಕೆ ಕಳುಹಿಸಲಾಗಿತ್ತು. ಅವರ ಆರೋಗ್ಯದಲ್ಲಿ ಸ್ಥಿರತೆ ಕಂಡು ಬಂದಿದ್ದರೂ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಹಿನ್ನಲೆಯಲ್ಲಿ ಚೆನ್ನೈಗೆ ಕರೆದೊಯ್ಯಲಾಗುತ್ತಿದೆ. ಮಠದಿಂದ ಅಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ಕರೆತಂದು ಏರ್‌ ಅಂಬುಲೆನ್ಸ್‌ ಮೂಲಕ ಚೆನ್ನೈಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತದೆ.

ಸಿದ್ಧಗಂಗಾ ಶ್ರೀಗಳ ಆರೋಗ್ಯದ ಬಗ್ಗೆ ಆತಂಕ ಬೇಡ. ಆರೋಗ್ಯ ಸ್ಥಿರವಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತರಿಸಿಕೊಳ್ಳುತ್ತಿದ್ದೇನೆ ಎಂದು ಶೃಂಗೇರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಸರ್ಕಾರ ಸಂಪೂರ್ಣ ಸಹಕಾರ ನೀಡಲಿದ್ದು ಚಿಕಿತ್ಸಾ ವೆಚ್ಚವನ್ನೂ ಭರಿಸಲಿದೆ ಎಂದು ತಿಳಿಸಿದರು.

ಮಠಕ್ಕೆ ಶುಕ್ರವಾರ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಶ್ರೀಗಳ ಆರೋಗ್ಯ ವಿಚಾರಿಸಿದರು. ಅವರು ಇನ್ನಷ್ಟು ಕಾಲ ಭಕ್ತರಿಗೆ ಆಶೀರ್ವಾದ ಮಾಡಬೇಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.

 

You may also like...

Leave a Reply

Your email address will not be published. Required fields are marked *